ತೆಕ್ಕಲಕೋಟೆ -
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಒಂದು ಪಟ್ಟಣ.  ಬಳ್ಳಾರಿಯಿಂದ ಉತ್ತರಕ್ಕೆ 43 ಕಿಮೀ. ದೂರದಲ್ಲಿದೆ.  ಪಶ್ಚಿಮಕ್ಕೆ ಸುಂದರ ಗುಡ್ಡಗಳ ಸಾಲು, ಐತಿಹಾಸಿಕ ಶ್ರೀಮಂತಿಕೆಯನ್ನು ಸಾರುವ ಅನೇಕ ಮಂದಿರಗಳು, ಕೋಟೆಗಳು ಇವುಗಳಿಂದ ರಮ್ಯವಾಗಿದೆ.  ಜನಸಂಖ್ಯೆ 23,578 (2001).

ಇದಕ್ಕೆ ಅನೇಕ ಶತಮಾನಗಳ ಇತಿಹಾಸವುಂಟು.  1963 - 64 ರಲ್ಲಿ ತೆಕ್ಕಲ ಕೋಟೆಯಲ್ಲಿ ನಡೆಸಿದ ಉತ್ಖನನದಿಂದ ಇಲ್ಲಿ ನೆಲೆಸಿದ್ದ ಶಿಲಾಯುಗದ ಜನರ ಜೀವನವನ್ನು ಕುರಿತ ವಿಪುಲವಾದ ಮತ್ತು ಉಪಯುಕ್ತವಾದ ಮಾಹಿತಿ ದೊರೆತಿದೆ.  ಇಲ್ಲಿ ಶಿಲಾಯುಗ ಕಾಲದಲ್ಲಿದ್ದ ಜನರು ವ್ಯವಸ್ಥಿತ ಜೀವನ ನಡೆಸುತ್ತಿದ್ದರು.  ಇವರು ಮೆಡಿಟರೇನಿಯನ್ ಮತ್ತು ಪ್ರೋಟೊ - ಆಸ್ಟ್ರಲಾಯಿಡ್ ಜನರೆಂದು ಹೇಳಲಾಗಿದೆ.  ಇವರು ಒಕ್ಕಲುತನ, ಪ್ರಾಣಿ ಸಾಕುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದರು.  ಇವರು ಬಂಗಾರದ ಆಭರಣ, ಪಾತ್ರೆ ಮುಂತಾದವನ್ನು ಮಾಡುವುದರಲ್ಲಿ ವಿಶೇಷ ನೈಪುಣ್ಯ ಪಡೆದಿದ್ದರು.
ತೆಕ್ಕಲಕೋಟೆಗೆ ಪಪೆಕಲ್ಲು ಎಂಬ ಹೆಸರಿತ್ತೆಂಬುದು 1021ರ ಒಂದು ಶಾಸನದಿಂದ ಗೊತ್ತಾಗುತ್ತದೆ.  ಬ್ರಹಾಧಿರಾಜನೆಂಬ ಅಧಿಕಾರಿ ಇಲ್ಲಿ ಆಡಳಿತ ನಡೆಸುತ್ತಿದ್ದ.  ವಿಜಯನಗರದ ಪತನದ ಅನಂತರ, 1565ರಲ್ಲಿ ತೆಕ್ಕಲಕೋಟೆಯನ್ನು ಬಾಳುದ ಹನುಮಪ್ಪನಿಗೆ ವಿಜಾಪುರದ ಸುಲ್ತಾನ  ದಾನವಾಗಿ ನೀಡಿದ.  ಈತ ಅಮರೇಶ್ವರ ದೇವಸ್ಥಾನಸ ಸುತ್ತಲೂ ಒಂದು ಕೋಟೆಯನ್ನು ಕಟ್ಟಿಸಿದ.  ಇದು ದಕ್ಷಿಣದ ಕೋಟೆಯೆಂದು ಪ್ರಸಿದ್ಧಿಪಡೆದಿತ್ತು.  ತೆಕ್ಕಲಕೋಟೆಯಲ್ಲಿ ದೊರೆತ ಕೈಬರಹದ ಪ್ರತಿಯ ಪ್ರಕಾರ 1725 ರಲ್ಲಿ ಬಾಳುದ ಹನುಮಪ್ಪನ ವಂಶಜರು ತೆಕ್ಕಲಕೋಟೆಯನ್ನು ಅದೋನಿಯ ಮುಸ್ಲಿಮ್ ಅಧಿಕಾರಿಗೆ ಬಿಟ್ಟುಕೊಟ್ಟರು.  ಅಂದಿನಿಂದ ತೆಕ್ಕಲಕೋಟೆಯಲ್ಲಿ ಮುಸ್ಲಿಮ್ ಆಳ್ವಿಕೆ ಪ್ರಾರಂಭವಾಯಿತು.  ಅದೋನಿಯ ನವಾಬತ್ ಅಲಿ ಇಲ್ಲಿಯ ಅಮಲದಾರನಾದ.  1759 ರಲ್ಲಿ ಅದೋನಿಯನ್ನು ಬಸಲತ್‍ಜಂಗ್ ಕೈವಶ ಮಾಡಿಕೊಂಡ.  ಈತ ಹಸನುಲ್ಲಾಖಾನ್ ಎಂಬವನನ್ನು ತೆಕ್ಕಲಕೋಟೆಯ ಅಮಲದಾರನಾಗಿ ನಿಯಮಿಸಿದ.  ಸ್ಥಳೀಯ ವೀರಭದ್ರ ದೇವರ ಗುಡಿಯ ಪಕ್ಕದಲ್ಲಿ ದೊರೆತ ಶಾಸನದಲ್ಲೂ ಇಂಥದೇ ವಿವರ ದೊರೆತಿದೆ.  ಮುಂದೆ 10 ವರ್ಷಗಳ ಅನಂತರ, 1769 ರಲ್ಲಿ ಬಸಲತ್ ಜಂಗ್ ಇದನ್ನು ಪೀರ್ ಬಾಜಿ ಮೊಹಿದೀನ್ ಸಾಹೇಬನಿಗೆ ಜಹಗೀರಾಗಿ ಕೊಟ್ಟ.  1775 ರಲ್ಲಿ ಬಳ್ಳಾರಿ - ಕುರುಗೋಡು ಹೈದರ್ ಅಲಿಗೆ ವಶವಾದ ಅನಂತರ ಅವನು ತೆಕ್ಕಲಕೋಟೆಯನ್ನೂ ವಶಪಡಿಸಿಕೊಂಡ.  ಈತನಿಂದ ಇಲ್ಲಿ ಕೋಟೆ ನಿರ್ಮಾಣವಾಯಿತು.
ತೆಕ್ಕಲಕೋಟೆಯಲ್ಲಿ ಅನೇಕ ಪ್ರಸಿದ್ಧ ಮಂದಿರಗಳಿವೆ.  ಅಮರೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧವಾದ್ದು.  1511 ರಲ್ಲಿ ವಿಜಯನಗರದ ಶ್ರೀಕೃಷ್ಣದೇವರಾಯನ ಸ್ಮರಣಾರ್ಥವಾಗಿ ಹಾಗೂ ಶಿವನ ಭಕ್ತಿಯ ಸಂಕೇತವಾಗಿ ಇದನ್ನು ಜಕ್ಕರಾಯ ಕಟ್ಟಿಸಿದನೆಂಬುದು ಈ ದೇವಸ್ಥಾನದಲ್ಲಿರುವ ಒಂದು ಶಾಸನದಿಂದ ತಿಳಿಯುತ್ತದೆ.  ಮಣ್ಣಿನಲ್ಲಿ ಹೂತುಹೋಗಿದ್ದ ಈ ದೇವಾಲಯವನ್ನು ಇತ್ತೀಚೆಗೆ ಅಗೆದು ತೆಗೆಯಲಾಗಿದೆ.

ಪಶ್ಚಿಮಕ್ಕೆ ಕಾಡುಸಿದ್ದಪ್ಪನ ಗುಡಿ ಇದೆ.  ಕಾಡುಸಿದ್ದಪ್ಪ ಪ್ರಸಿದ್ಧ ಪವಾಡ ಪುರುಷನಾಗಿದ್ದನೆಂಬುದು ಜನರ ನಂಬಿಕೆ.  ಮಳೆ ಬೇಕೆನಿಸಿದಾಗ ಮಳೆ ಬರಿಸುವುದು, ಗ್ರಾಮದ ಪ್ರಾಣಿಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದು ಮುಂತಾದ ಪವಾಡಗಳನ್ನು ಈತ ಮೆರೆಯುತ್ತಿದ್ದ.  ಇಲ್ಲಿರುವ ಇನ್ನೊಂದು ಐತಿಹಾಸಿಕ ಗುಡಿ ಹರಿಮಲ್ಲಪ್ಪನದು.  ಇಲ್ಲಿ ಪ್ರತಿ ವರ್ಷವೂ ಜಾತ್ರೆ ಉತ್ಸವಗಳು ಜರುಗುತ್ತವೆ.
(ಎಲ್.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ